ವಸತಿ ಸಚಿವ ವಿ ಸೋಮಣ್ಣ ರಾಜೀನಾಮೆ.? ಹೊಸ ಚಾಲೆಂಜ್ ಹಾಕಿದ ಸಚಿವರು

ಇದೇನಪ್ಪಾ ಸಚಿವ ವಿ ಸೋಮಣ್ಣ ರಾಜೀನಾಮೆ ನೀಡ್ತಾರಾ ಅಂತ ಅಂದುಕೊಳ್ಳಬೇಡಿ. 2021ರ ಜೂನ್ ಒಳಗೆ 25 ಸಾವಿರ ಮನೆ ನಿರ್ಮಾಣ ಮಾಡದೇ ಇದ್ದರೇ, ತಾವು ರಾಜಕೀಯವೇ ಮಾಡಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಎಂಬುದಾಗಿ ವಸತಿ ಸಚಿವ ವಿ ಸೋಮಣ್ಣ ಪ್ರತಿಜ್ಞೆ ಮಾಡಿದ್ದಾರೆ.

ವಿಕಾಸ ಸೌಧದಲ್ಲಿ ವಸತಿ ಇಲಾಖೆಯ ಅಧಿಕಾರಿಗಳ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದ ಮನೆ ನಿರ್ಮಾಣ ಕುರಿತಂತೆ ಸಭೆ ನಡೆಸಿ, ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ಡಿಸಿ, ತಹಶೀಲ್ದಾರ್, ಸರ್ವೆ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗಾಗಲೇ 43 ಸಾವಿರ ಮನೆ ನಿರ್ಮಾಣ ಕಾರ್ಯ ಪ್ರಾರಂಭ ಮಾಡಲಾಗಿದೆ ಎಂದರು.

ರಾಜ್ಯದಲ್ಲಿನ ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕಾರ್ಯದಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ. 35 ಸಾವಿರ ಹೊಸ ಮನೆ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗುತ್ತದೆ. 2021ರ ಜೂನ್ ಒಳಗೆ 25 ರಿಂದ 30 ಸಾವಿರ ಮನೆ ಬಡವರಿಗೆ ನಿರ್ಮಾಣ ಮಾಡಿ ಕೊಡಲಾಗುತ್ತದೆ. ಇದನ್ನು ಸವಾಲಾಗಿ ಸ್ವೀಕರಿಸಲಾಗಿದೆ. ಈ ಗುರಿಯನ್ನು ತಲುಪದೇ ಇದ್ದರೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು.