ಕಾಂಗ್ರೆಸ್ ಕಟ್ಟಾಭಿಮಾನಿ ಕಂಗಾನ ತಾಯಿ, ’ಕೈ’ ತೊರೆದು ಬಿಜೆಪಿಗೆ.?

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ಜಟಾಪಟಿಗೆ ಇಳಿದಿರುವ ನಟಿ ಕಂಗನಾ ರಣಾವತ್ ಅವರಿಗೆ ವೈ-ಪ್ಲಸ್ ಶ್ರೇಣಿಯ ಭದ್ರತೆ ನೀಡಿದುದಕ್ಕಾಗಿ ಕಂಗನಾ ಅವರ ತಾಯಿ ಆಶಾ ಕೇಂದ್ರ ಸರ್ಕಾರಕ್ಕೆ ತುಂಬುಹೃದಯದ ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ಮಗಳು ಸದಾ ಸತ್ಯದ ಪರ ನಿಲ್ಲುತ್ತಾಳೆ. ಹಾಗಾಗಿ ಆಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಡೀ ದೇಶದ ಆಶೀರ್ವಾದ ಆಕೆಯ ಮೇಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಕಂಗನಾ ತಾಯಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೇ ವೇಳೆ ಆಶಾ ಅವರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದರು. ಕಾಂಗ್ರೆಸ್​ನ ಕಟ್ಟಾ ಅನುಯಾಯಿಯಾಗಿರುವ ಆಶಾ ಅವರ ಈ ಹೇಳಿಕೆ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಅವರು ಬಿಜೆಪಿಯನ್ನು ಸೇರಲಿದ್ದಾರೆಯೇ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ, ಆಶಾ ಅವರಿಗೆ ಬಿಜೆಪಿ ಸ್ವಾಗತವನ್ನೂ ಕೋರಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಹಿಮಾಚಲ ಪ್ರದೇಶ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುರೇಶ್‌ ಕುಮಾರ್ ಕಶ್ಯಪ್‌, ಆಶಾ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಆದರೆ, ಬಿಜೆಪಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ (ಹಿಮಾಚಲ ಪ್ರದೇಶವು ಕಂಗನಾ ಅವರ ತವರು ರಾಜ್ಯ). ಬಿಜೆಪಿ ಸೇರ್ಪಡೆ ಕುರಿತಂತೆ ಆಶಾ ಅವರು ಇನ್ನೂ ಅಧಿಕೃತವಾಗಿ ಪಕ್ಷಕ್ಕೆ ಸೇರಿಕೊಂಡಿಲ್ಲ ಮತ್ತು ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನೂ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿಲ್ಲ. ಆದರೆ, ಅವರು ಪಕ್ಷಕ್ಕೆ ಸೇರಲು ನಿರ್ಧರಿಸಿದರೆ ಸ್ವಾಗತಿಸಲಿದ್ದೇವೆ ಎಂದು ಕಶ್ಯಪ್​ ಹೇಳಿದ್ದಾರೆ.

ನಾವು ಎಂದೂ ಬಿಜೆಪಿಯ ಬೆಂಬಲಿಗರಲ್ಲ. ಮೂಲತಃ ನಾವು ಕಾಂಗ್ರೆಸ್‌ಗೆ ಸೇರಿದವರು. ನನ್ನ ಮಾವ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದವರು. ಎಂದಿಗೂ ಅವರು ಇಷ್ಟೆಲ್ಲಾ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಂಗನಾ ಅವರಿಗೆ ವೈ-ಪ್ಲಸ್ ಶ್ರೇಣಿಯ ಭದ್ರತೆ ನೀಡಿರುವುದಕ್ಕೆ ಧನ್ಯವಾದ ಎಂದು ಆಶಾ ಹೇಳಿದ್ದರು. ಜತೆಗೆ, ನನ್ನ ಮಗಳಿಗೆ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸದಿದ್ದರೆ ಏನಾಗುತ್ತಿತ್ತೋ ಎಂದು ಆತಂಕ ವ್ಯಕ್ತಪಡಿಸಿದ್ದರು.