ಫ್ರಾನ್ಸ್ ಜತೆಗಿನ ರಕ್ಷಣ ಒಪ್ಪಂದದ ಭಾಗವಾಗಿ ಐದು ರಫೇಲ್ ಜೆಟ್ ಯುದ್ಧ ವಿಮಾನಗಳು ಮೊದಲ ಹಂತದಲ್ಲಿ ಭಾರತಕ್ಕೆ ಬಂದಿವೆ. ಜುಲೈ 29ರಂದು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ರಫೇಲ್ ವಿಮಾನಗಳು ಭೂಸ್ಪರ್ಶಿಸಿದವು. ಜುಲೈ 27ರಂದು ಫ್ರಾನ್ಸ್ನ ಬೋರ್ಡೆಕ್ಸ್ ಬಳಿಯಿರುವ ಮೆರಿಗ್ನ್ಯಾಕ್ ವಾಯುನೆಲೆಯಿಂದ ಟೇಕಾಫ್ ಆದ ರಫೇಲ್ ಜೆಟ್ಗಳು ಪ್ರಯಾಣದ ನಡುವೆ ಯುಎಇನಲ್ಲಿ ಒಮ್ಮೆ ಮಾತ್ರ ತಂಗಿದ್ದವು. ಸುಮಾರು 7000 ಕಿ.ಮೀ ಕ್ರಮಿಸಿದ ರಫೇಲ್ ಜೆಟ್ಗಳು ಜುಲೈ 29ಕ್ಕೆ ಭಾರತಕ್ಕೆ ಬಂದಿಳಿದವು.
ಇದರ ನಡುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ರಾನ್ಸ್ನಿಂದ ಭಾರತಕ್ಕೆ ಬಂದಿರುವ ಜೆಟ್ ವಿಮಾನಗಳಲ್ಲಿ ಒಂದಕ್ಕೆ ಪ್ರಯಾಣದ ವೇಳೆ 30 ಸಾವಿರ ಅಡಿ ಎತ್ತರದಲ್ಲಿ ಮಾರ್ಗ ಮಧ್ಯೆ ಇಂಧನ ತುಂಬುತ್ತಿರುವ ವಿಡಿಯೋ ಇದು ಎಂದು ಅಡಿಬರಹ ಬರೆದು ವಿಡಿಯೋ ಹರಿಬಿಡಲಾಗಿದೆ. ಅನೇಕ ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆದರೆ, ಇದು ಎಷ್ಟು ನಿಜಾಂಶವೆಂದು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ. ಸದ್ಯ ಹರಿದಾಡುತ್ತಿರುವ ವಿಡಿಯೋ ಎರಡು ವರ್ಷ ಹಳೆಯದು. ವಿಡಿಯೋವು ಬ್ರೆಜಿಲಿಯನ್ ಏರ್ ಪೋರ್ಸ್ಗೆ ಸಂಬಂಧಿಸಿದ್ದು. ಅಲ್ಲಿನ ವಾಯುನೆಲೆಯ ಎಫ್-5 ಯುದ್ಧ ವಿಮಾನವು ನೌಕಾಪಡೆಯ ಎ-4 ಯುದ್ಧ ವಿಮಾನಕ್ಕೆ ಮಾರ್ಗ ಮಧ್ಯೆ ಇಂಧನ ತುಂಬುತ್ತಿರುವ ವಿಡಿಯೋ ಇದಾಗಿದೆ. ಆ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.