ಇಸ್ಲಾಮಾಬಾದ್​​​​ನ ಹೊಸ ಏರ್​ಪೋರ್ಟ್​ ಹೇಗೆ ಉದುರಿ ಬೀಳ್ತಿದೆ ನೋಡಿ, ವೈರಲ್ ವಿಡಿಯೋ.?

ಪಾಕಿಸ್ತಾನದ ಇಸ್ಲಮಾಬಾದ್​​ನಲ್ಲಿ ಹೊಸದಾಗಿ ಕಟ್ಟಲಾಗಿದ್ದ ಏರ್​​ಪೋರ್ಟ್​​ನ ಒಂದು ಭಾಗ ಈಗಲೇ ಕುಸಿದುಬಿದ್ದಿದೆ. ಕಳೆದ ವಾರದಿಂದಲೂ ಸುರಿಯುತ್ತಿರುವ ಭರ್ಜರಿ ಮಳೆಯಿಂದಾಗಿ ಹೀಗಾಗಿದೆ ಎಂದು ಹೇಳಲಾಗುತ್ತಿದ್ದರೂ, ಪಾಕಿಸ್ತಾನ ವಾಯುಯಾನ ಪ್ರಾಧಿಕಾರ ಈ ಬಗ್ಗೆ ತನಿಖೆಗೆ ಸೂಚಿಸಿದೆ. ಏರ್​ಪೋರ್ಟ್​​ನ ನಿರ್ಗಮನ ದಿಕ್ಕಿನ ಕಡೆಯಲ್ಲಿ, ಸೀಲಿಂಗ್​​ ತುಂಡುತುಂಡಾಗಿ ಕೆಳಗೆ ಬೀಳುತ್ತಿರುವ ವಿಡಿಯೋ ವೈರಲ್​ ಆಗಿದೆ. ಹೀಗೆ ಏಕಾಏಕಿ ಸೀಲಿಂಗ್​ ಉದುರಿ ಬಿದ್ದಿದ್ದು ಆಗಸ್ಟ್​ 14ರಂದು. ಅಂದು ಆ ಭಾಗದಲ್ಲಿ 56 ಎಂಎಂ ನಷ್ಟು ಮಳೆಯಾಗಿತ್ತು. ಒಂದು ವಾರದಿಂದಲೂ ಸತತವಾಗಿ ಮಳೆ ಬರುತ್ತಿದ್ದ ಕಾರಣ ಹೀಗಾಗಿದೆ ಎಂದು ವಿಭಾಗೀಯ ವಾಯುಯಾನ ಪ್ರಾಧಿಕಾರದ ವಕ್ತಾರ ತಿಳಿಸಿದ್ದಾರೆ.

ಇಸ್ಲಮಾಬಾದ್​ನ ಈ ಏರ್​ಪೋರ್ಟ್​​ ಎರಡು ವರ್ಷಗಳ ಹಿಂದಷ್ಟೇ ಕಟ್ಟಲ್ಪಟ್ಟಿತ್ತು. ಆದರೆ ಪ್ರತಿ ಮಳೆಗಾಲದಲ್ಲೂ ನೀರು ಒಳಗೆ ಸೋರುತ್ತಿತ್ತು. ಏರ್​ಪೋರ್ಟ್​ ನಿರ್ಮಾಣ ಸರಿಯಾಗಿ ಆಗಿಲ್ಲ. ತುಂಬ ದೋಷಯುಕ್ತವಾಗಿದೆ ಎಂದು ಈಗಾಗಲೇ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಪಟ್ಟ ವಿಚಾರಣೆಯೂ ನಡೆಯುತ್ತಿದೆ. ಆದರೆ ಈ ಮಳೆಗಾಲದಲ್ಲಿ ಏರ್​ಪೋರ್ಟ್​ ಸೀಲಿಂಗ್​ ಉದುರಿ ಬಿದ್ದಿದೆ. ಅಲ್ಲಿಗೆ ಪಾಕ್​ ವಾಯುಯಾನ ಸಚಿವರು ಶೀಘ್ರದಲ್ಲೇ ಅಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)