ಇದೀಗ ಬಂದ ಸುದ್ದಿ:ಕೊರೊನಾ ಬಿಕ್ಕಟ್ಟಿನ ನಡುವೆ, ರಾಜಕೀಯ ಸಂಚಲನ ಉಪಮುಖ್ಯಮಂತ್ರಿ ಸ್ಥಾನದಿಂದ ಅಮಾನತು.!

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಲ್ಬಣವಾಗಿದ್ದು, ಬಂಡಾಯವೆದ್ದಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸಚಿನ್ ಪೈಲಟ್ ರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ ಎಂದು ಎಐಸಿಸಿ ಘೋಷಿಸಿದೆ.

ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಸಭೆಗೆ ಸತತವಾಗಿ ಸಚಿನ್ ಪೈಲಟ್ ಗೈರು ಹಾಜರಾಗಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಐಸಿಸಿ ಹೇಳಿದೆ. ಸಚಿನ್ ಪೈಲಟ್ ಸೇರಿ ಮೂವರನ್ನು ಅಶೋಕ್ ಗೆಹ್ಲೋಟ್ ಸಚಿವ ಸಂಪುಟದಿಂದ ಹೊರ ಹಾಕಲಾಗಿದೆ. ಗೋವಿಂದ್ ಸಿಂಗ್ ದೊತಾಸ್ರಾ ಅವರನ್ನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದರು.

ಈ ನಡುವೆ ದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರ ಜೊತೆ ಪೈಲಟ್ ಮಾತುಕತೆ ನಡೆಸಿದ್ದು, ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಸಚಿನ್ ಅವರು 30 ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರ ಬೆಂಬಲ ಹೊಂದಿದ್ದಾರೆ, ಅಶೋಕ್ ಸರ್ಕಾರವನ್ನು ಉರುಳಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸಚಿನ್ ಜೊತೆ ಮೂವರು ಶಾಸಕರು ಮಾತ್ರ ಇದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಸಭಾ ಚುನಾವಣೆ ಸಮಯದಿಂದಲೂ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈಗ ಮೂವರು ಪಕ್ಷೇತರ ಶಾಸಕರಿಗೆ 25 ರಿಂದ 30 ಕೋಟಿ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಕುರಿತು ತನಿಖೆ ಆರಂಭವಾಗಿದೆ. ಈ ಪ್ರಕರಣಕ್ಕೂ ಪೈಲಟ್ ಗೂ ನಂಟಿದೆ ಎಂದು ಕೇಳಿ ಬಂದಿದ್ದರಿಂದ ಸಚಿನ್ ಬಂಡಾಯವೆದ್ದಿದ್ದಾರೆ.