ಇದೀಗ ಬಂದ ಸುದ್ದಿ: ಪತನದಂಚಿನಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ, ಮತ್ತೊಂದು ರಾಜ್ಯದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಸಿದ್ದತೆ

ರಾಜಸ್ಥಾನ ರಾಜಕೀಯ ನಾಟಕ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ನೇತೃತ್ವದಲ್ಲಿ 25 ಶಾಸಕರು ನವದೆಹಲಿ ತಲುಪಿದ್ದು, ಹೈಕಮಾಂಡ್​ ಮುಂದೆ ಬಲಪ್ರದರ್ಶನ ನಡೆಸಲಿರುವುದಾಗಿ ಹೇಳಲಾಗುತ್ತಿದೆ. ಇದುವರೆಗೂ ಆಪರೇಷನ್​ ಕಮಲದ ಮೂಲಕ ಹಣದ ಆಮಿಷ ಒಡ್ಡಿ ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಆರೋಪಿಸುತ್ತಿದ್ದರು. ಆದರೆ, ಈಗ ಅವರು ಮತ್ತು ಡಿಸಿಎಂ ಸಚಿನ್​ ಪೈಲಟ್​ ನಡುವೆ ಏನೊಂದು ಸರಿಯಿಲ್ಲ. ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಕಂದಕ ದಿನೇದಿನೆ ಹಿಗ್ಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್​ ವಿರುದ್ಧ ಬಂಡಾಯ ಎದ್ದಿರುವ ಸಚಿನ್​ ಪೈಲಟ್​ ಪಕ್ಷದ ಹೈಕಮಾಂಡ್​ ಎದುರು ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ರಾಜಸ್ಥಾನದ ಕಾಂಗ್ರೆಸ್​ ಸರ್ಕಾರಕ್ಕೆ ಬೆಂಬಲ ನೀಡಿರುವ ಪಕ್ಷೇತರ ಶಾಸಕರಾದ ಓಂ ಪ್ರಕಾಶ್​ ಹುಡ್ಲಾ, ಸುರೇಶ್​ ಟಾಂಕ್​ ಮತ್ತು ಖುಶ್​ವೀರ್​ ಸಿಂಗ್​ ಕೂಡ ಪೈಲಟ್​ ಅವರನ್ನು ಬೆಂಬಲಿಸಿ ನವದೆಹಲಿ ತಲುಪಿರುವುದಾಗಿ ಹೇಳಲಾಗಿದೆ.

ಇದಕ್ಕೂ ಮುನ್ನ ಈ ಮೂವರು ಶಾಸಕರನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಿಸಿಕೊಂಡಿದ್ದರು. ಬೆದರಿಕೆ ತಂತ್ರಗಾರಿಕೆಯ ಮೂಲಕ ಸರ್ಕಾರವನ್ನು ಉರುಳಿಸುವ ಇವರ ಪ್ರಯತ್ನವನ್ನು ವಿಫಲಗೊಳಿಸಲು ಅಧಿಕಾರಿಗಳು ಯತ್ನಿಸಿದ್ದರು ಎನ್ನಲಾಗಿದೆ. ಶಾಸಕರೆಲ್ಲರಿಗೂ ಐಟಿಸಿ ದೆಹಲಿ ಹೋಟೆಲ್​ನಲ್ಲಿ 25 ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ವಾಣಿಜ್ಯೋದ್ಯಮಿಯೊಬ್ಬರ ಹೆಸರಿನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಶನಿವಾರ ರಾತ್ರಿ ಸಭೆ: ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಶನಿವಾರ ತಮ್ಮ ಬೆಂಬಲಿಗರ ಸಭೆಯನ್ನು ಕರೆದಿದ್ದರು. ಅವರ ಸಂಪುಟದ ಸಚಿವರು ಅನೇಕರು ಸಿಎಂ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗೆಹ್ಲೋಟ್​ ಬೆಂಬಲಿಗರು ತಮ್ಮ ಬೆಂಗಾವಲು ಪಡೆ ಸಿಬ್ಬಂದಿಯ ಮೂಲಕ ತಮ್ಮ ಪಕ್ಷದ ಶಾಸಕರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.