ಆರ್.ಎಸ್.ಎಸ್ ಸಂಘಟನೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಮಾಜಿ ಸಂಸದ

ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಎಂದುಕೊಂಡಿದ್ದೆ. ಆದರೆ, ಅದು ಸುಳ್ಳುಗಾರರನ್ನು ಸೃಷ್ಟಿಸುವ ಶಾಖೆ ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ ಟೀಕಿಸಿದರು. ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವಿಷಯದಲ್ಲೂ ಸಂಪೂರ್ಣ ವಿಫಲವಾಗಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಕೊಟ್ಟ ಕುದುರೆಯನ್ನು ಹತ್ತಲು ಸಾಧ್ಯವಿಲ್ಲದವರು ಮೋದಿಯೇ ಹೊರತು ಕಾಂಗ್ರೆಸ್‌ ನಾಯಕರಲ್ಲ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ದಿವಂಗತ ಅನಂತ್‌ಕುಮಾರ್‌ ಅವರು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಕಾರಾತ್ಮಕವಾಗಿ ಚಿಂತಿಸುತ್ತಿದ್ದರು. ನನಗೆ ಅನಂತಕುಮಾರ್‌ ಅವರ ಬಗ್ಗೆ ಅಪಾರ ಗೌರವವಿದೆ. ಬಿ.ಎಲ್‌.ಸಂತೋಷ್‌ ಕೂಡ ಅವರಂತೆಯೇ ಬೆಳೆಯುತ್ತಾರೆ ಎಂದು ಕೊಂಡಿದ್ದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸಂತೋಷ್‌ ನಡೆದುಕೊಳ್ಳುತ್ತಿದ್ದಾರೆ ಎಂದರು. 

ಬಿಜೆಪಿ ನಾಯಕರು ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಲು ಹೊರಟಿಲ್ಲ. ಆತ್ಮಹತ್ಯೆ ಭಾರತ ಮಾಡಲು ಹೊರಟಿದ್ದಾರೆ. ಜನ ಈಗಲೂ ಕಾಂಗ್ರೆಸ್‌ ಪಕ್ಷದ ಪರವಾಗಿದ್ದಾರೆ. ಆದರೂ ಬಿಜೆಪಿ ನಾಯಕರು ಸೋನಿಯಾಗಾಂಧಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಜನರಿಗೆ ಈಗ ಏನಾದರು ಪ್ರಯೋಜನ ಆಗುತ್ತಿದ್ದಲ್ಲಿಅದು ಈಗಿನ ಸರಕಾರದ ಶ್ರಮವಲ್ಲ. ಈ ಹಿಂದಿನ ಕಾಂಗ್ರೆಸ್‌ ಸರಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಫಲ ಎಂದರು.

ಕೇಂದ್ರ ಸರಕಾರ ವಲಸೆ ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕೊರೊನಾ ವೈರಸ್‌ ಸೋಂಕಿನ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ರಾಜ್ಯ ಸರಕಾರ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಈ ಕುರಿತು ತನಿಖೆಯಾಗಬೇಕು. ಅದೇ ರೀತಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್‌, ಕಾಂಗ್ರೆಸ್‌ ನಗರ ಜಿಲ್ಲಾಧ್ಯಕ್ಷ ಆರ್‌. ಮೂರ್ತಿ, ಮುಖಂಡ ಎಚ್‌.ಎ.ವೆಂಕಟೇಶ್‌ ಇದ್ದರು.