ವೈರಲ್ ಸುದ್ದಿ: ನದಿ ನೀರಿನಲ್ಲಿ ಮುಳುಗಿದ್ದ 500 ವರ್ಷ ಹಳೆಯ ದೇಗುಲ ಮತ್ತೆ ಗೋಚರ

ಮಹಾನದಿ ನದಿಯಲ್ಲಿ ದೀರ್ಘಕಾಲದಿಂದ ಮುಳುಗಿದ್ದ ಪುರಾತನ ದೇವಾಲಯವು ಒರಿಸ್ಸಾದ ನಾಯಗಢ ಜಿಲ್ಲೆಯಲ್ಲಿ ಮತ್ತೆ ಕಾಣಲಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಈ ಪ್ರಾಚೀನ ದೇವಾಲಯವು ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ (INTACH)ನ ಪುರಾತತ್ವ ಸಮೀಕ್ಷಾ ತಂಡವು ಇತ್ತೀಚೆಗೆ ಕಟಕ್‌ನ ಮಹಾನದಿಯ ಮೇಲ್‌ ಹರಿವಿನಲ್ಲಿ ಮುಳುಗಿರುವ ಪುರಾತನ ದೇವಾಲಯವನ್ನು ಕಂಡುಹಿಡಿದಿರುವುದಾಗಿ ಹೇಳಿಕೊಂಡಿದೆ.

ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ನ ಪ್ರಾಜೆಕ್ಟ್ ಅಸಿಸ್ಟೆಂಟ್ ದೀಪಕ್ ಕುಮಾರ್ ನಾಯಕ್ ಅವರ ನಿರಂತರ ಪ್ರಯತ್ನದ ಫಲವಾಗಿ ಈ ದೇವಾಲಯ ಕಾಣಸಿಕ್ಕಿದೆ. ಮುಳುಗಿದ ದೇವಾಲಯದ ಮೇಲ್ಭಾಗವು ನಾಯಗಢದ ಬಳಿಯ ಪದ್ಮಾಬತಿ ಗ್ರಾಮದ ಬೈದೇಶ್ವರ ಬಳಿ ನದಿಯ ಮಧ್ಯದಲ್ಲಿ ಪತ್ತೆಯಾಗಿದೆ. ಮುಳುಗಿದ 60 ಅಡಿಗಳ ದೇವಾಲಯದ ಮಸ್ತಕದ ನಿರ್ಮಾಣ ಶೈಲಿ ಮತ್ತು ನಿರ್ಮಾಣಕ್ಕೆ ಬಳಸುವ ವಸ್ತುಗಳನ್ನು ಪರಿಗಣಿಸಿದರೆ 15 ನೇ ಶತಮಾನದ ಕೊನೆಯಲ್ಲಿ ಅಥವಾ 16 ನೇ ಶತಮಾನದ ಆರಂಭದಲ್ಲಿ ಇದನ್ನು ಕಟ್ಟಲಾಗಿರಬಹುದು ಎಂದು ನಂಬಲಾಗಿದೆ.

ಪುರಾತತ್ವ ತಜ್ಞರಾದ ದೀಪಕ್ ಕುಮಾರ್ ನಾಯಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಭಗವಾನ್ ವಿಷ್ಣುವಿನ ಒಂದು ರೂಪವಾದ ಗೋಪಿನಾಥನಿಗೆ ಸೇರಿದ 60 ಅಡಿಗಳ ದೇವಾಲಯವು 15 ನೇ ಶತಮಾನದ ಅಥವಾ 16 ನೇ ಶತಮಾನದ ಆರಂಭಕ್ಕೆ ಸೇರಿತ್ತು” ಎಂದು ಹೇಳಿದರು. ದೇವಾಲಯ ಕಂಡುಬಂದ ಪ್ರದೇಶವನ್ನು ‘ಸತಪತಾನ’ ಎಂದು ಪರಿಗಣಿಸಲಾಗುತ್ತದೆ. ಪದ್ಮಾಬತಿ ಗ್ರಾಮವು ಏಳು ಗ್ರಾಮಗಳ ಸಂಯೋಜನೆಯಾದ ಸತಪಟಾನದ ಭಾಗವಾಗಿತ್ತು. ಈ ದೇವಾಲಯವನ್ನು ಭಗವಾನ್ ಗೋಪಿನಾಥ ದೇವರಿಗೆ ಅರ್ಪಿಸಲಾಗಿದೆ.

150 ವರ್ಷಗಳ ಹಿಂದೆ ಪ್ರವಾಹದಿಂದಾಗಿ ನದಿ ತನ್ನ ಹಾದಿಯನ್ನು ಬದಲಾಯಿಸುವುದರೊಂದಿಗೆ, ಅದರ ಹರಿವು ಬದಲಾಯಿತು ಮತ್ತು 19 ನೇ ಶತಮಾನದಲ್ಲಿ ಇಡೀ ಗ್ರಾಮವು ನದಿಯಿಂದ ಮುಳುಗಿತು ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಸುಮಾರು 22 ದೇವಾಲಯಗಳಿವೆ, ಆದರೆ ನೀರಿನಿಂದ ಕೂಡಿದ ಗೋಪಿನಾಥ ದೇವಾಲಯದ ‘ಮಸ್ತಕ’ ಮಾತ್ರ ಕೆಲವು ವರ್ಷಗಳಿಂದ ಗೋಚರಿಸಿದೆ ಎಂದು ಪದ್ಮಾಬತಿ ಗ್ರಾಮದ ಸ್ಥಳೀಯರು ತಿಳಿಸಿದ್ದಾರೆ.

Comments